
ಬೆಂಗಳೂರು: ಚುನಾವಣಾ ಆಯೋಗದ ನಿರ್ಧಾರಗಳು ಮತ್ತು ಕಾರ್ಯವೈಖರಿಯಲ್ಲಿ ಇನ್ನಷ್ಟು ಪಾರದರ್ಶಕತೆ ಇರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. ಚುನಾವಣಾ ಆಯುಕ್ತರ ಭಿನ್ನಮತದ ಪತ್ರಗಳ ವಿಚಾರ ಪ್ರಸ್ತಾಪಿಸಿರುವ ಅವರು, ನಿರ್ಧಾರ ಸರ್ವಾನುಮತದಿಂದ ಆಗಿದ್ದರೆ ಭಿನ್ನಮತದ ಪತ್ರಗಳ ಅಗತ್ಯವೇನು ಎಂದು ಪ್ರಶ್ನಿಸಿದ್ದಾರೆ.
ಮೂವರು ಆಯುಕ್ತರಲ್ಲಿ ಇಬ್ಬರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಿರ್ಧಾರವನ್ನು ಒಪ್ಪಿರಲಿಲ್ಲ ಎಂಬ ಆರೋಪವನ್ನು ಉಲ್ಲೇಖಿಸಿದ ಖರ್ಗೆ, ನಿರ್ಧಾರ ಏಕಪಕ್ಷೀಯವಾಗಿ ಕೈಗೊಳ್ಳಲಾಗಿದೆಯೇ ಅಥವಾ ಸರ್ವಾನುಮತದಿಂದ ಆಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ಭಿನ್ನಮತದ ಪತ್ರಗಳನ್ನು ಕಾಂಗ್ರೆಸ್ ಬರೆದಿಲ್ಲ, ಆಯುಕ್ತರೇ ಬರೆದಿದ್ದಾರೆ ಎಂದು ಹೇಳಿರುವ ಅವರು, ಕೇಂದ್ರ ಸರ್ಕಾರದ ಒತ್ತಡದಿಂದ ಆ ಪತ್ರಗಳನ್ನು ಹಿಂಪಡೆಯುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜ್ಞಾನೇಶ್ ಕುಮಾರ್ ಪರವಾಗಿ ಬಿಜೆಪಿ ನಾಯಕರು ಉತ್ತರಿಸುತ್ತಿರುವುದೇಕೆ ಎಂದೂ ಪ್ರಶ್ನಿಸಿದ್ದಾರೆ.
ಜ್ಞಾನೇಶ್ ಕುಮಾರ್ ಅವರಿಗೆ ನ್ಯಾಯಾಂಗ ವಿನಾಯಿತಿ ನೀಡಿರುವ ವಿಚಾರವನ್ನೂ ಪ್ರಸ್ತಾಪಿಸಿರುವ ಖರ್ಗೆ, ನಿರ್ಧಾರ ಸರ್ವಾನುಮತದಿಂದ ಆಗಿದ್ದರೆ ನ್ಯಾಯಾಂಗ ವಿನಾಯಿತಿಯನ್ನು ತೆಗೆದುಹಾಕಲಿ ಎಂದು ಆಗ್ರಹಿಸಿದ್ದಾರೆ.
ಚುನಾವಣಾ ಆಯೋಗದ ಸಾಫ್ಟ್ವೇರ್ನಲ್ಲಿನ ಲೋಪಗಳಿಗೆ ಆದೇಶ ನೀಡಿದವರು ಯಾರು? ಅದರಲ್ಲಿ ಬದಲಾವಣೆ ಮಾಡಿದವರು ಯಾರು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಎಂದು ಅವರು ಹೇಳಿದ್ದಾರೆ. ಚುನಾವಣಾ ಆಯೋಗದ ಹಲವು ನಿರ್ಧಾರಗಳ ಕುರಿತು ಇನ್ನೂ ಅನೇಕ ಪ್ರಶ್ನೆಗಳು ಉತ್ತರಕ್ಕಾಗಿ ಕಾಯುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.




