
ಆಸ್ಟಿನ್ (ಟೆಕ್ಸಾಸ್): ಜನಪ್ರಿಯ ನಟ–ನಿರ್ದೇಶಕ ರಮೇಶ್ ಅರವಿಂದ್ ಅವರಿಗೆ ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ಪಟ್ಟಣವು ವಿಶೇಷ ಗೌರವ ಸಲ್ಲಿಸಿದೆ. ಆಗಸ್ಟ್ 23ರಂದು ನಡೆದ ‘ಡೇ ಆಫ್ ಗ್ರಾಟಿಟ್ಯೂಡ್ 2025’ ಕಾರ್ಯಕ್ರಮದಲ್ಲಿ ‘ರಮೇಶ್ ಅರವಿಂದ್ ಡೇ’ ಎಂದು ಆಚರಿಸಲಾಯಿತು.
ಅವರ ನಟನೆ, ನಿರ್ದೇಶನ ಹಾಗೂ ಚಲನಚಿತ್ರ ಕ್ಷೇತ್ರದ ಸಾಧನೆ, ಜೊತೆಗೆ ಸ್ಪೂರ್ತಿದಾಯಕ ಮಾತುಗಳಿಂದ ಜನಮನ ಗೆದ್ದ ಕಾರಣ ಈ ಗೌರವ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಆಸ್ಟಿನ್ ನಗರದ ಮೇಯರ್ ಪ್ರೊಟೆಮ್ ವನೀಸಾ, ಟೆಕ್ಸಾಸ್ ಗವರ್ನರ್ ಗ್ರೆಗ್ ಅಬೌಟ್ ಅವರ ಸಂದೇಶವಿರುವ ಸನ್ಮಾನ ಪತ್ರವನ್ನು ರಮೇಶ್ ಅರವಿಂದ್ ಅವರಿಗೆ ನೀಡಿ ಗೌರವಿಸಿದರು.
ಸಾವಿರಾರು ಗಣ್ಯರ ಸಮ್ಮುಖದಲ್ಲಿ ನಡೆದ ಈ ಸಮಾರಂಭಕ್ಕೆ ಗ್ರಾಟಿಟ್ಯೂಡ್ ಡೇ ಸಂಸ್ಥಾಪಕ ಎಂ.ಜೆ. ಚಾರ್ಮನಿ ಸ್ವಾಗತಿಸಿದರು. ನಗರದ ಚೀಫ್ ಲರ್ನಿಂಗ್ ಆಫೀಸರ್ ಮೀಚಲೇ ಲಾ ಟೋರನ್ ಕೂಡ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ಅರವಿಂದ್, “ಇದು ನನ್ನ ಜೀವನದ ಅಭೂತಪೂರ್ವ ಕ್ಷಣ. ನಾನು ಇದನ್ನು ಎಂದಿಗೂ ಮರೆಯಲಾರೆ” ಎಂದು ಭಾವೋದ್ಗಾರ ವ್ಯಕ್ತಪಡಿಸಿದರು.







