
ಬೆಂಗಳೂರು: ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರ ಬೇಡಿಕೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಗಂಭೀರವಾಗಿ ಗಮನ ಹರಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಬಿಬಿಎಂಪಿ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರು ಸಲ್ಲಿಸಿದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, “ನಿಮ್ಮ ವೇತನ ಗೊಂದಲದ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರ ಬಗೆಹರಿಸಲಾಗುವುದು. ಐದು ಜನರ ನಿಯೋಗದೊಂದಿಗೆ ಮತ್ತೊಮ್ಮೆ ನನ್ನನ್ನು ಭೇಟಿ ಮಾಡಿ. ಆಗ ಸಮಸ್ಯೆಗಳ ಪರಿಹಾರದ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.
ಗುತ್ತಿಗೆದಾರರಿಂದವೇತನ ಪಾವತಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಡಿಕೆಶಿ, “ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಅನ್ನು ನಗರದಲ್ಲಿ ಕಸದ ನಿರ್ವಹಣೆಗೆ ಸ್ಥಾಪಿಸಲಾಗಿದೆ. ಇದನ್ನು ಗುತ್ತಿಗೆದಾರರು ನೋಡಿಕೊಳ್ಳುವುದಿಲ್ಲ. ಇದರ ಮುಖ್ಯಸ್ಥರಾಗಿ ಐಎಎಸ್ ಅಧಿಕಾರಿ ನೇಮಕವಾಗಿರುತ್ತಾರೆ” ಎಂದು ಹೇಳಿದರು.







