
ಬೆಂಗಳೂರು : ಬಹುಕಾಲದ ಬೇಡಿಕೆಗಳನ್ನು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಪ್ರತಿಭಟನೆಗೆ ಇಳಿದಿದ್ದಾರೆ. ಆಗಸ್ಟ್ 12, 13, 14 ರಂದು ಮೂರು ದಿನಗಳ ರಾಜ್ಯವ್ಯಾಪಿ ಜಿಲ್ಲಾ ಮಟ್ಟದ ಆಶಾ ಕಾರ್ಯಕರ್ತೆಯರ ಪ್ರತಿಭಟನಾ ಧರಣಿ ಆಯೋಜಿತವಾಗಿದೆ. .
ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ನೇತೃತ್ವದಲ್ಲಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು, ರಾಜ್ಯ ಸರ್ಕಾರ ನೀಡಿರುವ ಭರವಸೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದ್ದಾರೆ.
ಹಕ್ಕೊತ್ತಾಯಗಳು:
- ಮುಖ್ಯಮಂತ್ರಿಗಳು ಘೋಷಿಸಿದ ರಾಜ್ಯದ ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಠ ರೂ.10 ಸಾವಿರ ಗ್ಯಾರಂಟಿಯನ್ನು ಈ ಏಪ್ರಿಲ್ ಇಂದ ಅನ್ವಯವಾಗುವಂತೆ ಆದೇಶ ಹೊರಡಿಸಬೇಕು
- 2025 ಮಾರ್ಚ್ ರಾಜ್ಯ ಬಜೆಟ್ ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ರೂ. 1000 ಪ್ರೋತ್ಸಾಹಧನ ಹೆಚ್ಚಳ ಮಾಡಿದಂತೆಯೇ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಸಹ ಹೆಚ್ಚಳ ಮಾಡಬೇಕು.
- ತರ್ಕಬದ್ದಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುವ ಜನಸಂಖ್ಯೆಯ ಮಿತಿಯನ್ನು ಹೆಚ್ಚಿಸುವುದನ್ನು ಕೈಬಿಡಿ. ಈ ಹೆಸರಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು.
- ಅವೈಜ್ಞಾನಿಕ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು.
- ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು.
- ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು.
- ನಗರ ಆಶಾಗಳಿಗೆ ರೂ.2000 ಗೌರವಧನ ಹೆಚ್ಚಿಸಬೇಕು.
- 2025 ಜೂನ್-ಜುಲೈನಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು.
ಈ ನಡುವೆ, ಆಶಾ ಕಾರ್ಯಕರ್ತರ ಬೇಡಿಕೆಗಳು ನ್ಯಾಯೋಚಿತವಾಗಿವೆ ಎಂದು ಸಂಘ ಸಂಸ್ಥೆಗಳು ಹೇಳಿವೆ. ಅರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತರು ತಮ್ಮ ವೇತನ ಸಂಬಂಧ ಬಹುಕಾಲದಿಂದಲೇ ಹೋರಾಟ ನಡೆಸುತ್ತಿದ್ದಾರೆ. ಆದಾಗಿಯೂ ಸಿಎಂ ಸಿದ್ದರಾಮಯ್ಯ ಅವರೇ ಆಶಾಗಳ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಅದನ್ನು ಸರ್ಕಾರ ಈಡೇರಿಸಬೇಕಿತ್ತು ಎಂದು ಸಾಮಾಜಿಕ ಹೋರಾಟಗಾರರು ಪ್ರತಿಕ್ರಿಯಿಸಿದ್ದಾರೆ.







