
ಚಾಮರಾಜನಗರ: ಹನೂರು ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾದ ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನದ ರಂಗಮಂದಿರ ಆವರಣದಲ್ಲಿ ಸೋಮವಾರದಂದು ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹ ನಡೆಯಿತು. 93 ನವ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಬೆಳಗ್ಗೆ 9:20 ರಿಂದ 10.10 ಗಂಟೆಯೊಳಗೆ ಸಲ್ಲುವ ಶುಭ ಕಟಕ ಲಗ್ನದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಸಾಲೂರು ಬೃಹನ್ಮಠದ ಪೀಠಾಧಿಪತಿ ಗಳಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ರವರ ಆಶೀರ್ವಚನಗಳೊಂದಿಗೆ ಉಚಿತ ಸಾಮೂಹಿಕ ವಿವಾಹವು ಶಾಸ್ತ್ರೋಕ್ತವಾಗಿ ನೆರವೇರಿತು.
ಮಲೆ ಮಹದೇಶ್ವರ ಪ್ರಾಧಿಕಾರದ ವತಿಯಿಂದ ವಧುವಿಗೆ ಚಿನ್ನದ ಮಾಂಗಲ್ಯ, ಕಾಲುಂಗುರ, ಸೀರೆ, ರವಿಕೆ ವಿತರಿಸಲಾಗಿತ್ತಲ್ಲದೇ ವರನಿಗೆ ಪಂಚೆ, ಷರ್ಟ್, ಟವಲ್ ಹಾಗೂ ಪೇಟವನ್ನು ನೀಡಲಾಗಿತ್ತು. ವಿವಾಹ ಮಹೋತ್ಸವದಲ್ಲಿ 16 ಅಂತರ್ಜಾತಿ ವಿವಾಹ ವಾಗಿದ್ದು ,ಹಾಗೂ ಅಂಗವಿಕಲತೆ ಒಂದು ಜೋಡಿ ವಿಶೇಷವಾಗಿತ್ತು.
ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾ ಸ್ವಾಮೀಜಿ ಮಾತನಾಡಿ ಪವಿತ್ರವಾದ ಕ್ಷೇತ್ರಗಳಲ್ಲಿ ಮಹದೇಶ್ವರ ಬೆಟ್ಟ ಅಮೂಲ್ಯವಾದದ್ದು, ಈ ಕ್ಷೇತ್ರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರುವುದು ನಿಮ್ಮ ಜೀವನದ ಪುಣ್ಯ ಕ್ಷಣಗಳು ವೈವಾಹಿಕ ಜೀವನದಲ್ಲಿ ನಡೆಯುವ ಘಟನೆಗಳನ್ನು ಪರಸ್ಪರ ಸಮಾನವಾಗಿ ಹಚ್ಚಿಕೊಳ್ಳಬೇಕು ಹಾಗೂ ಈ ಕ್ಷೇತ್ರದ ಶಾಸಕರು ಕ್ಷೇತ್ರ ದ ಎಲ್ಲಾ ಹಳ್ಳಿಗಳಿಗೂ ಮೂಲಭೂತ ಸೌಕರ್ಯಗಳನ್ನೂ ಒದಗಿಸುವ ಕನಸು ನನಸಾಗಲಿ ಎಂದು ಶುಭ ಹಾರೈಸಿರು.
ಶಾಸಕ ಎಂ ಆರ್ ಮಂಜುನಾಥ್ ಮಾತನಾಡಿ, ಮಲೆಮಹದೇಶ್ವರ ಬೆಟ್ಟವು ಧಾರ್ಮಿಕ ಯಾತ್ರ ಸ್ಥಳವಾಗಿದ್ದು, ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದೆ. ಇಲ್ಲಿನ ಮಾದಪ್ಪನ ಮಹಿಮೆಯಿಂದ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ. ಇಲ್ಲಿ ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸುತ್ತಿರುವುದು ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗಲಿದೆ. ಇಲ್ಲಿ ಮದುವೆಯಾದ ದಂಪತಿಗಳು ಇದುವರೆಗೂ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಮದುವೆ ಎನ್ನುವುದು ಜೀವನದ ಪವಿತ್ರ ಬಂಧವಾಗಿದ್ದು, ದಂಪತಿಗಳು ಅನ್ಯೋನ್ಯವಾಗಿ ಜೀವನ ನಡೆಸಬೇಕು. ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆ ಇದ್ದೆ ಇರುತ್ತದೆ. ಆದರೆ ಸಮಸ್ಯೆಗಳನ್ನು ಎದುರಿಸಿ ಜೀವನ ನಡೆಸುವುದೇ ನಿಜವಾದ ಬದುಕು , ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಳ್ಳುವುದು ವ್ಯರ್ಥ ಸರಳವಾಗಿ ಸಾಮೂಹಿಕ ವಿವಾಹವಾಗುವುದು ನಮ್ಮ ಮುಂದಿನ ಜೀವನಕ್ಕೆ ಸಹಯವಾಗುತ್ತದೆ ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ,ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಬಿ.ಟಿ ಕವಿತಾ, ಸಿಇಓ ಮೋನಾ ರೋತ್, ಮಹದೇಶ್ವರ ಬೆಟ್ಟದ ಕಾರ್ಯದರ್ಶಿ ಎ ಇ ರಘು, ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷರು ಎಚ್ ವಿ ಚಂದ್ರು,ಹನೂರು ತಹಸೀಲ್ದಾರ್ ಚೈತ್ರ, ಡಿ ವೈ ಎಸ್ ಪಿ ಧರ್ಮೇಂದ್ರ, ಮೆಟ್ಟೂರು ಶಾಸಕರಾದ ಸದಾಶಿವ, ಮ ಮ ಬೆಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷರು ಅರ್ಚನಾ, ಉಪ ಕಾರ್ಯದರ್ಶಿ ಚಂದ್ರ ಶೇಖರ್,ಚಾಮರಾಜನಗರ ಜಿಲ್ಲಾ ಕೆಎಸ್ಆರ್ ಟಿ ಸಿ ,ಡಿ ಸಿ ಅಶೋಕ್ ಕುಮಾರ್, ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರುಗಳಾದ ಭಾಗ್ಯಮ್ಮ, ಮಹದೇವಪ್ಪ, ಮರಿಸ್ವಾಮಿ, ಆರ್.ಎಸ್ ಕುಮಾರ ವಿಜಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಾಧಿಕಾರದ ಸಿಬ್ಬಂದಿಗಳು ಸಾರ್ವಜನಿಕರು ಭಕ್ತಾದಿಗಳು ಭಾಗವಹಿಸಿದ್ದರು.
ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಸಾಮೂಹಿಕ ವಿವಾಹದಂತಾಹ ಮಹತ್ ಕಾರ್ಯವನ್ನು 1989ನೇ ವರ್ಷದಿಂದ ಪ್ರಾರಂಭಿಸಿ ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹವನ್ನು ನಡೆಸಿಕೊಟ್ಟು ಆರ್ಥಿಕವಾಗಿ ಹಿಂದುಳಿದವರಿಗೆ ದಾರಿದೀಪವಾಗಿರುತ್ತದೆ. 1989 ರಿಂದ ಉಚಿತ ಸಾಮೂಹಿಕ 2019 ರವರೆಗೆ ಒಟ್ಟು 1782 ಜೋಡಿ ವಧು ವರರಿಗೆ ಪ್ರಾಧಿಕಾರದ ವತಿಯಿಂದ ಉಚಿತವಾಗಿ ಸಾಮೂಹಿಕ ವಿವಾಹವನ್ನು ಮಾಡಿಸಲಾಗಿದೆ, ನಂತರ 2022 ರಲ್ಲಿ 48 ಜೋಡಿ, 2023ರಲ್ಲಿ 37 ಹಾಗೂ 2024ರಲ್ಲಿ 64 ಜೋಡಿಗಳು, 1989 ರಿಂದ 2014 ರವರೆಗೆ 1931 ಜೋಡಿಗಳು, ಪ್ರಸ್ತುತ ಸಾಲಿನಲ್ಲಿ 93 ಜೋಡಿಗಳು ಜೀವನ ಸಂಗಾತಿಗಳಾಗಿ ಶ್ರೀ ಮಲೆ ಮಹದೇಶ್ವರ ಸ್ವಾಮಿಯವರ ಕೃಪೆಗೆ ಪಾತ್ರರಾಗಿರುತ್ತಾರೆ.







