
ಬೆಂಗಳೂರು: ಮುಜರಾಯಿ ಇಲಾಖೆಗೆ ತನ್ನದೇ ಆದ ಕಟ್ಟಡ ದೊರೆಯುವ ದಾರಿ ಸುಗಮವಾಗಿದೆ. ಚಾಮರಾಜಪೇಟೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಇಲಾಖೆ, ಇದೀಗ ನಗರದ ಕೆ.ಆರ್.ವೃತ್ತದಲ್ಲಿರುವ ಹತ್ತು ಸಾವಿರ ಚದರ ಅಡಿ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಐದು ಅಂತಸ್ತಿನ ‘ಧಾರ್ಮಿಕ ಸೌಧ’ ಕಟ್ಟಡಕ್ಕೆ ಸದ್ಯವೇ ಕಾಲಿಡಲಿದೆ.
ಸುಮಾರು ₹27 ಕೋಟಿಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕಟ್ಟಡಕ್ಕೆ ಸಂಪುಟದಿಂದಲೇ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ಸಿಗಲಿದೆ.
ಮುಜರಾಯಿ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಸಚಿವ ರಾಮಲಿಂಗಾರೆಡ್ಡಿ ಅವರು ಇಲಾಖೆಗೆ ಹೊಸ ಆಯಾಮ ನೀಡುತ್ತಾ ಬಂದಿದ್ದು, ಭಕ್ತರು ಮತ್ತು ಅರ್ಚಕರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿದ್ದಾರೆ.
ಹೊಸ ಕಟ್ಟಡದ ನಿರ್ಮಾಣದ ಹಿಂದೆ ಅವರ ವಿಶೇಷ ಆಸಕ್ತಿ ಮತ್ತು ಮುಂದಾಳತ್ವವೇ ಪ್ರಮುಖ ಕಾರಣವಾಗಿದ್ದು, “ಆದಷ್ಟು ಬೇಗನೆ ‘ಧಾರ್ಮಿಕ ಸೌಧ’ ಉದ್ಘಾಟನೆ ನಡೆಯಲಿ” ಎಂದು ಅವರ ಬೆಂಬಲಿಗರು ಆಶಿಸಿದ್ದಾರೆ.
“ತಮ್ಮದೇ ಆದ ಸ್ವಂತ ಕಟ್ಟಡದಿಂದ ಮುಜರಾಯಿ ಇಲಾಖೆಯ ಕಾರ್ಯವೈಖರಿ ಮತ್ತಷ್ಟು ಬಲ ಪಡೆಯಲಿದೆ” ಎಂದು ಧಾರ್ಮಿಕ ಮುಖಂಡರು ಪ್ರತಿಕ್ರಿಯಿಸಿ, ಸಚಿವ ರಾಮಲಿಂಗಾರೆಡ್ಡಿ ಅವರ ಪ್ರಯತ್ನವನ್ನು ಅಭಿನಂದಿಸಿದ್ದಾರೆ.







