
ನವದೆಹಲಿ: ಅತಿ-ಸಂಸ್ಕರಿಸಿದ (ultra-processed) ಆಹಾರ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ, ಪುರುಷರಲ್ಲಿ ವೀರ್ಯದ ಗುಣಮಟ್ಟಕ್ಕೂ ಹಾನಿ ಮಾಡುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ.
ಸೆಲ್ ಮೆಟಾಬಾಲಿಸಮ್ ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನ ಪ್ರಕಾರ, ಸಂಸ್ಕರಿಸದ ಆಹಾರದಷ್ಟೇ ಕ್ಯಾಲೊರಿಗಳನ್ನು ಹೊಂದಿದ್ದರೂ, ಅತಿ-ಸಂಸ್ಕರಿಸಿದ ಆಹಾರ ಸೇವಿಸಿದವರು ಹೆಚ್ಚಿನ ಕೊಬ್ಬು ತೂಕವನ್ನು ಗಳಿಸಿದ್ದಾರೆ. ಅಲ್ಲದೆ, ಇವು ಹಾರ್ಮೋನ್ ಅಡ್ಡಿಪಡಿಸುವ ವಸ್ತುಗಳನ್ನು ದೇಹಕ್ಕೆ ಪರಿಚಯಿಸುವ ಮೂಲಕ ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತವೆ.
ಕೋಪನ್ಹೇಗನ್ ವಿಶ್ವವಿದ್ಯಾಲಯದ ಸಂಶೋಧಕಿ ಜೆಸ್ಸಿಕಾ ಪ್ರೆಸ್ಟನ್ ಹೇಳುವಂತೆ, “ಅತಿ-ಸಂಸ್ಕರಿಸಿದ ಆಹಾರಗಳನ್ನು ಮಿತವಾಗಿ ಸೇವಿಸಿದರೂ ಸಹ ಅವು ಚಯಾಪಚಯ ಹಾಗೂ ಸಂತಾನೋತ್ಪತ್ತಿ ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಆಹಾರದ ಸಂಸ್ಕರಣೆ ಪ್ರಕ್ರಿಯೆಯೇ ಅವುಗಳನ್ನು ಅಪಾಯಕಾರಿಯಾಗಿ ಮಾಡುತ್ತದೆ” ಎಂದು ತಿಳಿಸಿದ್ದಾರೆ.
ಈ ಅಧ್ಯಯನಕ್ಕಾಗಿ 20–35 ವರ್ಷದ 43 ಪುರುಷರನ್ನು ಆಯ್ಕೆ ಮಾಡಲಾಗಿತ್ತು. ಮೂರು ವಾರಗಳ ಕಾಲ ಸಂಸ್ಕರಿಸದ ಹಾಗೂ ಅತಿ-ಸಂಸ್ಕರಿಸಿದ ಆಹಾರ ಪದ್ಧತಿಗಳನ್ನು ಅವರಿಗೆ ನೀಡಲಾಯಿತು. ಫಲಿತಾಂಶದಲ್ಲಿ ಅತಿ-ಸಂಸ್ಕರಿಸಿದ ಆಹಾರ ಸೇವಿಸಿದವರು ಸರಾಸರಿ 1 ಕೆಜಿ ಹೆಚ್ಚುವರಿ ಕೊಬ್ಬು ತೂಕವನ್ನು ಪಡೆದಿದ್ದರು.
ಇನ್ನು, ಅವರ ದೇಹದಲ್ಲಿ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಬಳಸುವ ಫ್ತಾಲೇಟ್ cxMINP ಎಂಬ ಹಾರ್ಮೋನ್ ಅಡ್ಡಿಪಡಿಸುವ ವಸ್ತುವಿನ ಮಟ್ಟ ಹೆಚ್ಚಾಗಿತ್ತು. ಇದರಿಂದ ಟೆಸ್ಟೋಸ್ಟೆರಾನ್ ಮತ್ತು ವೀರ್ಯ ಉತ್ಪಾದನೆಗೆ ಅಗತ್ಯವಾದ ಇತರ ಹಾರ್ಮೋನ್ ಮಟ್ಟ ತಗ್ಗಿರುವುದು ಪತ್ತೆಯಾಗಿದೆ.
“ಆರೋಗ್ಯವಂತ ಯುವಕರಲ್ಲಿಯೇ ಇಷ್ಟೊಂದು ಪರಿಣಾಮ ಕಂಡುಬಂದಿರುವುದು ಆತಂಕಕಾರಿ. ದೀರ್ಘಕಾಲೀನ ಪರಿಣಾಮಗಳನ್ನು ತಪ್ಪಿಸಲು ಪೌಷ್ಠಿಕ ಮಾರ್ಗಸೂಚಿಗಳನ್ನು ಮರುಪರಿಶೀಲಿಸಬೇಕಾಗಿದೆ” ಎಂದು ಸಂಶೋಧನೆಯಲ್ಲಿ ಪಾಲ್ಗೊಂಡ ಪ್ರೊಫೆಸರ್ ರೊಮೈನ್ ಬ್ಯಾರೆಸ್ ಎಚ್ಚರಿಕೆ ನೀಡಿದ್ದಾರೆ.







